Sunday, October 28, 2012

ಅಚ್ಚ ಕನ್ನಡ pure ಕನ್ನಡ

"ಸಾರ್.. ಈ address ಎಲ್ಲಿ ಬರತ್ತೆ?"
"ಇದಾ? ಹುಡುಕೋದು ತುಂಬಾ easy. ಹೀಗೇ straight ಆಗಿ ಹೋಗಿ. ಮುಂದೆ first left ನಲ್ಲಿ turn ಆಗಿ. ಅಲ್ಲೇ 4th ಕ್ರಾಸ್ ನಲ್ಲಿ 3rd house."
 
"ನಿಮ್ಮ mobile number ಕೊಡ್ತೀರ?"
"note ಮಾಡ್ಕೊಳ್ಳಿ. nine four four three eight.."
 
ಇದು ದಿನ ನಿತ್ಯದ ಮಾತುಕತೆ. ಇದರಲ್ಲಿ ವಿಶೇಷ ಏನು ಎಂದಿರಾ? "ದಿನ ನಿತ್ಯದ ಮಾತುಕತೆ" - ಹೌದು. ನಾವು ಗಮನಿಸದ ವಿಶೇಷತೆ ಎಂದರೆ ನಮ್ಮ ಕನ್ನಡದಲ್ಲಿ ಇಂಗ್ಲಿಷ್ ಅನ್ನು ತುಸು ಜಾಸ್ತಿಯೇ ಬಳಸುತ್ತೇವೆಂಬುದು. ಮೇಲಿನ ಸಂಭಾಷಣೆಯನ್ನು ಮತ್ತೊಮ್ಮೆ ಗಮನಿಸಿ. ಇದು ಎಷ್ಟು ನಿಜ ಎಂದು ಅರಿವಾಗುತ್ತದೆ.
 
ಒಂದು ಭಾಷೆ ಮತ್ತೊಂದು ಬಾಷೆಯನ್ನು ಒಳಗೊಳ್ಳುತ್ತಾ ಬೆಳೆಯುತ್ತದೆ ಎಂಬುದು ನಿಜ. ಆದರೆ ದಿನ ನಿತ್ಯ ಬಳಸಬಹುದಾದ, ಎಲ್ಲರಿಗೂ ಅರ್ಥವಾಗುವ ಪದಗಳಿಗೂ ಬೇರೆ ಭಾಷೆ ಬಳಸುವುದು ಅನವಶ್ಯಕ ಎನಿಸದಿರಲಾರದು. ಮೇಲಿನ ಉಧಾಹರಣೆಯನ್ನೇ ನೋಡಿ. ಮೊಬೈಲ್ ಎಂಬ ಇಂಗ್ಲಿಷ್ ಬಳಕೆ ಸಹ್ಯ. ಸಾರ್ ಕೂಡ ಕೊಂಚ ಮಟ್ಟಿಗೆ ಒಪ್ಪಬಹುದು. ಆದರೆ ತೀರಾ easy, first, house ಗಳಂತ ಇಂಗ್ಲಿಷ್ ಪದಗಳು ಬೇಕೇ? ಸುಲಭ, ಒಂದು, ಮನೆ ಎಂಬ ದಿನ ನಿತ್ಯ ಬಳಕೆಯ ಕನ್ನಡ ಪದಗಳನ್ನು ಬಳಸಬಹುದಲ್ಲವೇ? ದೂರವಾಣಿ ಸಂಖ್ಯೆ ಕೊಡುವಾಗ ಕನ್ನಡದ ಅಂಕೆಗಳನ್ನು ಬಳಸಬಹುದಲ್ಲ. ಇದು ಸರಿ ತಪ್ಪಿನ ಪ್ರಶ್ನೆ ಅಲ್ಲ. ನಮ್ಮ ಅರಿವಿಗೆ ಬಾರದೆ ನಡೆಯುತ್ತಿರುವ ಪ್ರಕ್ರಿಯೆ.
 
ಹೌದಲ್ಲ ಎನಿಸಿತೆ? ಅಮಿತಾಬ್ ಬಚ್ಚನ್ ಶುದ್ಧ ಹಿಂದಿ ಯನ್ನು ಸುಲಲಿತವಾಗಿ ಮಾತಾಡುವಂತೆ ನಾವು ಅಚ್ಚ ಕನ್ನಡವನ್ನು ಮಾತಾಡೋಣ ಅಲ್ಲವೇ?. ಇಂಗ್ಲಿಷ್ ಮಾತಾಡುವಾಗ pure english ಮಾತಾಡೋಣ.
ಇದನ್ನು ಸಾಧಿಸುವುದು ಕಷ್ಟವೇನಲ್ಲ. ಇಂಗ್ಲಿಷ್ ನಲ್ಲಿ 'catching yourself' ಎನ್ನುತ್ತಾರೆ. ಅಂದರೆ ನಿಮ್ಮ ಕನ್ನಡದ ಮಾತಿನ ಮಧ್ಯೆ ಇಂಗ್ಲಿಷ್ ನುಸುಳಿದಾಗ 'ಥಟ್ಟನೆ ಗಮನಿಸಿ'. ಆ ಇಂಗ್ಲಿಷ್ ಗೆ ಸಮನಾರ್ಥಕವಾದ ದಿನ ನಿತ್ಯದ ಕನ್ನಡ ಪದ ಇದೆಯೇ ಗಮನಿಸಿ. ಇದ್ದರೆ ಕೂಡಲೇ ನೀವು ಮೊದಲು ಹೇಳಿದ್ದ ವಾಕ್ಯವನ್ನು ಕನ್ನಡ ಪದ ಸೇರಿಸಿ ಪುನರುಚ್ಚರಿಸಿ. "ತುಂಬಾ easy" ಎಂದು ಹೇಳಿದಾಗ easy ಪದಕ್ಕೆ ಕನ್ನಡ ಪದ ಇದೆಯೇ ಎಂದು ಗಮನಿಸಿ. 'ಸುಲಭ' ಇದೆಯಲ್ಲ ಅನಿಸಿದ ಕೂಡಲೇ ಹಿಂದೆ ಹೇಳಿದ್ದ ವಾಕ್ಯವನ್ನು ಹೀಗೇ ಪುನರುಚ್ಚರಿಸಿ. "ತುಂಬಾ ಸುಲಭ".
 
ಇನ್ನೊಬ್ಬರನ್ನು ಸೇರಿಸಿಕೊಂಡರೆ ಇದೊಂದು ಮನೋರಂಜಕ ಹಾಗು ಜ್ಞಾನದಯಕ ಆಟ ಕೂಡ ಆಗಬಲ್ಲದು. ನಿಮ್ಮ ಹೆಂಡತಿ/ಗೆಳೆಯ/ಸಹೋದ್ಯೋಗಿ/ಸಹೋದರಿ ಗೆ ಹೇಳಿಡಿ, ನೀವು ದಿನ ಬಳಕೆಯ ಕನ್ನಡ ಪದದ ಬದಲಾಗಿ ಇಂಗ್ಲಿಷ್ ಬಳಸಿದರೆ ಕೂಡಲೇ ಹೇಳಬೇಕು ಎಂದು. ಅವರನ್ನು ನೀವು ಗಮನಿಸಿ.
 
ಫೇಸ್ ಬುಕ್ ನಲ್ಲಿ ಒಂದು ಒಂದು ಗುಂಪು ಇದೆ. ಬನ್ನಿ ಎಲ್ಲರು ಒಟ್ಟಾಗಿ ನಮ್ಮ ಅನುಭವಗಳನ್ನು ಹಂಚಿಕೊಳ್ಳೋಣ. http://www.facebook.com/AchchaKannada
ಒಂದು ಬ್ಲಾಗ್ ಕೂಡ ಇದೆ. http://achchakannada.blogspot.in
 
ಕೊನೆಯಲ್ಲಿ: 'ಮೊಬೈಲ್ ಸಂಖ್ಯೆ' ಎನ್ನಬೇಕೋ ಅಥವಾ 'ಮೊಬೈಲ್ ನಂಬರ್' ಚೆಂದವೋ? ನೀವೇ ನಿರ್ಧರಿಸಿ. decide ಮಾಡಬೇಡಿ ಅಷ್ಟೇ!!. ಅಷ್ಟಕ್ಕೂ ಯಾವುದೇ ಭಾಷೆ ಕರ್ಮಟ ಅಲ್ಲ.

No comments:

Post a Comment